ಬಾಷ್, ಕಾರ್ಲ್ 
1874-1940. ಜರ್ಮನಿಜಾತ ಔದ್ಯೋಗಿಕ ರಸಾಯನವಿಜ್ಞಾನಿ. ಈಗಿನ ಪಶ್ಚಿಮ ಜರ್ಮನಿಯ ಕೋಲೋನ್ ಪಟ್ಟಣದಲ್ಲಿ 1874 ಆಗಸ್ಟ್ 27ರಂದು ಜನನ. ಅಧಿಕ ಒತ್ತಡದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಡೆದ ಮಹತ್ತರ ಸಂಶೋಧನೆಗಳಿಗಾಗಿ ಫ್ರೆಡ್ರಿಕ್ ಬರ್ಗಿಯಸ್ ಜೊತೆ ನೊಬೆಲ್ ಪಾರಿತೋಷಿಕ (1931) ಗಳಿಸಿದ.

ನೈಟ್ರೊಜನ್ ಮತ್ತು ಹೈಡ್ರೊಜನ್ ಧಾತುಗಳ ಮೇಲೆ ಯುಕ್ತ ವೇಗವರ್ಧಕಗಳ ನೆರವಿನಿಂದ ಅಧಿಕ ಸಂಮರ್ದ ಮತ್ತು ಉಷ್ಣತೆ ಪ್ರಯೋಗಿಸಿ ಅಮೊನಿಯಾ ಪಡೆಯುವ ವಿಧಾನವನ್ನು ಫ್ರಿಟ್ಜ್ ಹೇಬರ್ ಪ್ರಯೋಗಶಾಲೆಯಲ್ಲಿ ತೋರಿಸಿದ (1908). ಇದರಿಂದ ಉತ್ತೇಜನಗೊಂಡ ಬ್ಯಾಡಿಷ್ ಅನಿಲಿನ್ ಅಂಡ್ ಸೋಡಾ ಫ್ಯಾಬ್ರಿಕ್ ಕಾರ್ಖಾನೆಯವರು ಈ ವಿಧಾನ ಅನುಸರಿಸಿ ಅಮೊನಿಯಾವನ್ನು ಔದ್ಯೋಗಿಕ ಪ್ರಮಾಣದಲ್ಲಿ ತಯಾರಿಸಲು 1909ರಲ್ಲಿ ಭಾಷ್‍ನಿಗೆ ವಿಶೇಷ ಅಧಿಕಾರ ಕೊಟ್ಟು ನೇಮಿಸಿದರು. ಹೇಬರನ ಪ್ರಾಯೋಗಿಕ ವಿಧಾನವನ್ನು ಔದ್ಯೋಗಿಕ ವಿಧಾನಕ್ಕೆ ಬದಲಾಯಿಸಲು ಅನೇಕ ಬದಲಾವಣೆಗಳು ಅವಶ್ಯವೆಂದು ಬಾಷ್ ಮನಗಂಡು ಸಾವಿರಾರು ಪ್ರಯೋಗ ಮಾಡಿದ. ಮುಖ್ಯವಾಗಿ ವೇಗವರ್ಧಕಗಳ ಬದಲಾವಣೆ ಅಗತ್ಯವಾಗಿತ್ತು. ಹೇಬರ್ ಬಳಸಿದ್ದ ಆಸ್ಮಿಯಮ್‍ಗಳಿಗೆ ಬದಲಾಗಿ ಬಾಷ್ ಕಡಿಮೆ ವೆಚ್ಚದ ಪ್ರತ್ಯಾಮ್ಲೀಯ ವಸ್ತುಗಳೊಂದಿಗೆ ಬೆರೆಸಿದ ಕಬ್ಬಿಣವನ್ನು ವೇಗವರ್ಧಕವಾಗಿ ಉಪಯೋಗಿಸಿದ. ಇದು ಔದ್ಯೋಗಿಕ ಕ್ಷೇತ್ರಕ್ಕೆ ಈತನ ಅಮೂಲ್ಯ ಕೊಡುಗೆ. ಅಧಿಕ ಸಂಮರ್ದ ಹೇರಿದಾಗ ಅಮೊನಿಯಾ ಉತ್ಪಾದನೆ ಹೆಚ್ಚಾಗುತ್ತಿದ್ದುದರಿಂದ, ಈ ಸಂಮರ್ದವನ್ನು ತಾಳಬಲ್ಲ ಸಲಕರಣೆಗಳನ್ನು ಉಪಯೋಗಿಸುವ ಅಗತ್ಯವಿತ್ತು. ಹೀಗಾಗಿ ಹೈಡ್ರೊಜನ್ ಹಾಯಿಸಲು ಉಕ್ಕಿನ ಕೊಳವೆಗಳನ್ನು ಬಳಸಬೇಕಾಯಿತು. ಆದರೆ ಉಕ್ಕಿನಲ್ಲಿರುವ ಇಂಗಾಲ ಅಧಿಕ ಸಂಮರ್ದಯುತ ಹೈಡ್ರೊಜನ್ನಿನೊಡನೆ ವರ್ತಿಸುವ ಹೊಸ ಸಮಸ್ಯೆ ಎದುರಾಯಿತು. ಇದನ್ನು ತಪ್ಪಿಸಲು ಬಾಷ್ ಉಕ್ಕಿನ ಕೊಳವೆಯ ಮೇಲೆ ಇಂಗಾಲರಹಿತ ಮೃದು ಕಬ್ಬಿಣದ ಮತ್ತೊಂದು ಕೊಳವೆ ಜೋಡಿಸುವ ವಿಧಾನ ಪತ್ತೆ ಹಚ್ಚಿದ. ಈ ರೀತಿ ಅಮೊನಿಯಾ ತಯಾರಿಸಲು ಹೆಚ್ಚು ಪ್ರಮಾಣದಲ್ಲಿ ಹೈಡ್ರೊಜನ್ನನ್ನು ತಯಾರಿಸಬೇಕಾಯಿತು. ಔದ್ಯೋಗಿಕ ಉಪಯೋಗಗಳಿಗೆ ಒಂದು ಧಾತುವನ್ನು ತಯಾರಿಸುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶ ಅದಕ್ಕೆ ತಗಲುವ ವೆಚ್ಚ. ನೀರಾವರಿ ಮತ್ತು ವಾಟರ್‍ಗ್ಯಾಸ್ ಮಿಶ್ರಣವನ್ನು ಅಧಿಕೋಷ್ಣತೆಯಲ್ಲಿ ಯುಕ್ತ ವೇಗವರ್ಧಕದ ಮೇಲೆ ಹಾಯಿಸಿ ಹೈಡ್ರೊಜನ್ನನ್ನು ಮಿತ ಖರ್ಚಿನಲ್ಲಿ ತಯಾರಿಸುವ ವಿಧಾನವನ್ನೂ ಬಾಷ್ ರೂಪಿಸಿದ. 1909ರಲ್ಲಿ ಪ್ರಾರಂಭವಾದ ಈತನ ಸಂಶೋಧನೆ ಕೇವಲ ಐದು ವರ್ಷಗಳ ಅವಧಿಯಲ್ಲಿ ಇಡೀ ಜರ್ಮನಿಯಲ್ಲೇ ಒಂದು ದೊಡ್ಡ ಉದ್ಯಮವಾಗಿ ವಿಕಸಿಸಿತು. ಲ್ಯೂಡ್ ವಿಗ್‍ಷಾಫೆನ್ ಹತ್ತಿರವಿರುವ ಒಪ್ಪಾನ್ ಎಂಬ ಪಟ್ಟಣದಲ್ಲಿ ಅಮೊನಿಯಾ ತಯಾರಿಸುವ ಕಾರ್ಖಾನೆಯನ್ನು 1910ರಲ್ಲಿ ಸ್ಥಾಪಿಸಲಾಯಿತು. ಅದನ್ನು ಇನ್ನಷ್ಟು ವಿಸ್ತರಿಸಬೇಕೆನ್ನುವಷ್ಟರಲ್ಲಿ ಒಂದನೆಯ ಮಹಾಯುದ್ಧ ಪ್ರಾರಂಭವಾಯಿತು. ಸಹಜವಾಗಿ ಸೈನ್ಯಾಧಿಕಾರಿಗಳು ಸಿಡಿಮದ್ದುಗಳ ತಯಾರಿಕೆಗೆ ಬಾಷ್‍ನ ಸೇವೆ ಬಯಸಿದರು. ಇವನು ಅಮೊನಿಯಾದಿಂದ ಸಾಲ್ಟ್‍ಪೀಟರನ್ನೂ ಇದರಿಂದ ಸಿಡಿಮದ್ದನ್ನೂ ತಯಾರಿಸಿ ಯುದ್ಧಕಾರ್ಯಕ್ಕೆ ನೆರವಾದ. ಆದರೆ ತನ್ನ ಸಂಶೋಧನಫಲ ವಿನಾಶಕಾರ್ಯದಲ್ಲಿ ಪರ್ಯವಸಾನಗೊಂಡದ್ದು ನೋಡಿ ತೀವ್ರ ಮನಃಕ್ಷೋಭೆಗೆ ಒಳಗಾದ. ಮರು ವರ್ಷವೇ, 1919, ಜರ್ಮನಿಗೆ ಒದಗಿದ ಬರದಲ್ಲಿ ಅವನು ಇದೇ ಕ್ಷೇತ್ರದಲ್ಲಿ ಮುಂದುವರಿಸಿದ ಸಂಶೋಧನೆಯ ಫಲವಾಗಿ ರಾಸಾಯನಿಕ ಗೊಬ್ಬರ ತಯಾರಿಕೆಯ ಸೂತ್ರ ಬಾಷ್‍ನಿಗೆ ಕರಗತವಾಯಿತು. ಮಹಾಯುದ್ಧದಲ್ಲಿ ಸೋತು ಸೊರಗಿ ಹೋಗಿದ್ದ ಜರ್ಮನಿ ರಸಗೊಬ್ಬರದ ಬಳಕೆಯಿಂದ ಅಧಿಕ ಬೆಳೆ ಉತ್ಪಾದಿಸಿ ಚೇತರಿಸಿಕೊಂಡಿತು. ರಸಗೊಬ್ಬರದ ಮೂಲ ಪುರುಷ ಬಾಷ್.

ಈತ ರಸಗೊಬ್ಬರವಾಗಿ ಉಪಯೋಗಿಸುವ ಯೂರಿಯಾ ಎಂಬ ವಸ್ತುವನ್ನು ಅಧಿಕ ಒತ್ತಡ ಪ್ರಯೋಗಿಸಿ ಅಮೊನಿಯಮ್ ಕಾರ್ಬಮೇಟಿನಿಂದ ಪಡೆಯುವ ವಿಧಾನ ಕೂಡ ಶೋಧಿಸಿದ. ಫಾರ್ಮಾಲ್ಡಿಹೈಡ್ ಉತ್ಪಾದಿಸಲು ಬೇಕಾದ ಮೆಥನಾಲ್ ಸಂಶ್ಲೇಷಣೆಯ ವಿಧಾನ ರೂಪಿಸಿದ. ಹೀಗೆ ಅನೇಕ ಉಪಯುಕ್ತ ಮತ್ತು ಪ್ರಖ್ಯಾತ ಸಂಶೋಧನೆಗಳನ್ನು ನಡೆಸಿ ಕೀರ್ತಿ ಪ್ರತಿಷ್ಠೆಗಳಲ್ಲಿ ಉನ್ನತಿಗೇರಿದ. ಮರಣ 26-4-1940.									(ಜಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ